ತಾಳೀಕೋಟೆ -
 	ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಒಂದು ಪಟ್ಟಣ. ಮುದ್ದೇಬಿಹಾಳದಿಂದ ಈಶಾನ್ಯಕ್ಕೆ ಸು. 25ಕಿಮೀ. ದೂರದಲ್ಲಿ ಡೋಣಿ ನದಿಯ ಎಡದಂಡೆಯ ಮೇಲೆ ಇದೆ. ಜನಸಂಖ್ಯೆ 14,537 (1917) ವಿಜಯನಗರದ ಪತನಕ್ಕೆ ಕಾರಣವಾದ, 1565ರ ನಿರ್ಣಾಯಕ ಕದನ ನಡೆದದ್ದು ಇದಕ್ಕೆ ಸಮೀಪದಲ್ಲಿಯೇ. 

	1750ರಲ್ಲಿ ಪೇಷ್ವೆ ಬಾಳಾಜಿ ಬಾಜೀರಾಯ ತಾಳೀಕೋಟೆಯನ್ನು ತನ್ನ ಮೈದುನ ಆನಂದರಾಯನಿಗೆ ಜಹಗೀರಿಯಾಗಿ ಕೊಟ್ಟ. ಪೇಷ್ವೆಗಳ ಪತನಾನಂತರ ಆನಂದರಾಯನ ಮೊಮ್ಮಗ ಇದನ್ನು ತನ್ನ ಆಡಳಿತಕೇಂದ್ರವಾಗಿ ಮಾಡಿಕೊಂಡ. ಆನಂದರಾಮ್ ಇಲ್ಲಿ ಮಾರುಕಟ್ಟೆಯೊಂದನ್ನು ಕಟ್ಟಿಸಿದ. ಆತನ ಮೊಮ್ಮಗ ತನ್ನ ಉಪಯೋಗಕ್ಕಾಗಿ ಒಂದು ವಾಡೆಯನ್ನು ಕಟ್ಟಿಸಿದ. ಮೊದಲು ಕೋಟೆಯ ಆವರಣಕ್ಕೆ ಸೀಮಿತವಾಗಿದ್ದ ಪಟ್ಟಣ ಇಂದು ಬೆಳೆದು ವಿಶಾಲವಾಗಿದೆ. ಅನೇಕ ಕಡೆ ಕೋಟೆ ಗೋಡೆಯನ್ನು ಒಡೆದು ವಿಶಾಲವಾದ ರಸ್ತೆಗಳನ್ನು ನಿರ್ಮಿಸಿದ್ದಾರೆ. ತಾಳೀಕೋಟೆಯಲ್ಲಿ ಎರಡು ಮಸೀದಿಗಳಿವೆ. ಪಾಂಚ್ ಪೀರ್ ಎಂಬ ಮಸೀದಿಯನ್ನು ಪಂಚಪಾಂಡವರ ದೇವಸ್ಥಾನವೆಂದು ಅನೇಕ ಹಿಂದೂಗಳೂ ಸಂದರ್ಶಿಸುತ್ತಾರೆ. ನಗರೇಶ್ವರ ಮತ್ತು ಸಿದ್ಧೇಶ್ವರ ಇಲ್ಲಿ ಎರಡು ಪುರಾತನ ಶಿವಾಲಯಗಳು, ಇವೆರಡೂ ಕಲ್ಯಾಣ ಚಾಳುಕ್ಯ ವಾಸ್ತುಶೈಲಿಯವು. ಪಟ್ಟಣದಲ್ಲಿ ಮಾಸವಾಡಿ ಸೇವುಣರ (12ನೆಯ ಶತಮಾನ) ಕೆಲವು ಶಾಸನಗಳು ದೊರಕಿವೆ. ಇಲ್ಲಿ ಎರಡು ಪ್ರವಾಸಿ ಮಂದಿರಗಳೂ ಒಂದು ಪ್ರೌಢಶಾಲೆ ಮತ್ತು ಒಂದು ಜೂನಿಯರ್ ಕಾಲೇಜೂ ಇವೆ. ಇಲ್ಲೊಂದು ಸಾರ್ವಜನಿಕ ಗ್ರಂಥಾಲಯವೂ ಇದೆ. 

	ಈ ಸುತ್ತಣ ಪ್ರದೇಶಕ್ಕೆ ತಾಳೀಕೋಟೆ ಒಂದು ಪ್ರಮುಖ ವ್ಯಾಪಾರಕೇಂದ್ರ. ಇಲ್ಲಿ ರೆಗ್ಯುಲೇಟೆಡ್ ಮಾರ್ಕೆಟ್ ಇದೆ. ಜೋಳ, ಸೇಂಗಾ, ಹತ್ತಿ, ಎಳ್ಳು - ಇಲ್ಲಿ ವ್ಯಾಪಾರವಾಗುವ ಪ್ರಮುಖ ಬೆಳೆಗಳು. ಪಟ್ಟಣದ ಸುತ್ತಣ ಪ್ರದೇಶದಲ್ಲಿ ಅರಗಲ್ಲು (ಮಿಣಜಗಿ ಪರೆ) ತೆಗೆಯುವ ಗಣಿಗಳಿವೆ. ಇಲ್ಲಯ ಆಡಳಿತ ನಡೆಯುವುದು ಪಟ್ಟಣ ಪಂಚಾಯತಿ ಸಮಿತಿಯಿಂದ. 		  (ಕೆ.ವಿ.ಆರ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ